Current Date 25 Aug, 2026

ವಂಚನೆ, ಅಪಹರಣದ ಆರೋಪ ಹೊತ್ತವರನ್ನು ತಲೆ ಮೇಲೆ ಹೊತ್ತು ಮೆರೆಸುತ್ತಿರುವ ಬಿಗ್ ಬಾಸ್, ಪ್ರೇಕ್ಷಕರ ಆಕ್ಷೇಪ...!

ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಬಿಗ್ ಬಾಸ್ ಕಾರ್ಯಕ್ರಮವನ್ನ ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ. ಇಂಥಾ ಕಾರ್ಯಕ್ರಮ ಈಗ ಕನ್ನಡದಲ್ಲಿ ಮುಕ್ತಾಯದ ಹಂತಕ್ಕೆ ಬಂದು ತಲುಪುತ್ತಿದೆ. ಜನ ಮನ ಗೆಲ್ಲುವಲ್ಲಿ ಕೂಡ ಯಶಸ್ವಿಯಾಗಿದೆ. ಆದರೆ, ಇದೇ ಸಮಯದಲ್ಲಿ ಬಿಗ್ ಬಾಸ್ ಮನೆಗೆ ಹೋಗಲು ಬೇಕಿರುವ ಮಾನದಂಡಗಳೇನು, ಯಾವ ಆಧಾರದ ಮೇಲೆ ಬಿಗ್ ಬಾಸ್ ಸ್ಫರ್ಧಿಗಳನ್ನು ಆಯ್ಕೆ ಮಾಡಲಾಗುತ್ತೆ ಎನ್ನುವ ಚರ್ಚೆ ಶುರುವಾಗಿದೆ.

ಹೌದು, ಸಾಮಾನ್ಯವಾಗಿ ಚಿತ್ರರಂಗದಲ್ಲಿ ಕಿರುತೆರೆಯಲ್ಲಿ ಹೆಸರು ಮಾಡಿರುವ ಅಥವಾ ವಿವಾದಕ್ಕೀಡಾದ ವ್ಯಕ್ತಿಯನ್ನು ಬಿಗ್ ಬಾಸ್ ಮನೆಗೆ ಕರೆತಂದು ಬಿಡಲಾಗುತ್ತೆ. ಒಮ್ಮೊಮ್ಮೆ ಜನ ಸಾಮಾನ್ಯರಿಗೆ ಕೂಡ ಅವಕಾಶ ಮಾಡಿಕೊಡಲಾಗುತ್ತೆ. ಸೋಶಿಯಲ್ ಮೀಡಿಯಾ ಇನ್ ಪ್ಲುಯೆನ್ಸರ್‌ಗಳಿಗೆ ಕೂಡ ಬಿಗ್ ಬಾಸ್ ಕಡೆಯಿಂದ ಬುಲಾವ್ ಬರುತ್ತೆ. ಆದರೆ ಈಗೀಗ ವಂಚನೆಯ ಆರೋಪವನ್ನು ಹೊತ್ತಿರುವವರನ್ನು ಕೂಡ ಬಿಗ್ ಬಾಸ್ ತಲೆ ಮೇಲೆ ಹೊತ್ತು ಮೆರೆಸುತ್ತಿದೆ. ಇದು ಎಷ್ಟು ಸರಿ ಎನ್ನುವುದೇ ಸದ್ಯಕ್ಕೆ ಸಾರ್ವತ್ರಿಕ ವಲಯದಲ್ಲಿ ಎದ್ದಿರುವ ಪ್ರಶ್ನೆ.